×

ಲಕ್ಕುಂಡಿಯಲ್ಲಿ ಬಾಲಕನಿಗೆ ಸಿಕ್ತು ಚಿನ್ನದ ನಿಧಿ!

ಲಕ್ಕುಂಡಿಯಲ್ಲಿ ಬಾಲಕನಿಗೆ ಸಿಕ್ತು ಚಿನ್ನದ ನಿಧಿ!

ಲಕ್ಕುಂಡಿ ಒಂದು ಐತಿಹಾಸಿಕ ಗ್ರಾಮ. ಕಲ್ಯಾಣ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಕಾಲದಲ್ಲಿ ಇದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು. “ನೂರೊಂದು ಬಾವಿ, ನೂರೊಂದು ಗುಡಿ”ಗಳ ಊರು ಎಂಬ ಹೆಸರಿನಿಂದ ಪ್ರಸಿದ್ಧಿಯಾದ ಈ ಗ್ರಾಮವು ತನ್ನ ಶ್ರೀಮಂತ ಇತಿಹಾಸಕ್ಕಾಗಿ ಹೆಸರುವಾಸಿಯಾಗಿದೆ.ಇಂತಹ ಲಕ್ಕುಂಡಿ ಗ್ರಾಮದಲ್ಲೇ ಇತ್ತೀಚೆಗೆ ಪುರಾತನ ನಿಧಿಯೊಂದು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲೂ ಮತ್ತು ಇಡೀ ಜಿಲ್ಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಗಂಗವ್ವ ವೃತ್ತಿ ಎಂಬುವರ ಮನೆಯಲ್ಲಿ ಪಾಯ ತೆಗೆಯುವ ಸಂದರ್ಭದಲ್ಲಿ ಒಂದು ಚಿಕ್ಕ ಬಿಂದಿಗೆಯಲ್ಲಿ ಚಿನ್ನದ ನಿಧಿ ದೊರೆತಿದೆ. ಗ್ರಾಮಸ್ಥರ ಅಂದಾಜು ಪ್ರಕಾರ, ಈ ನಿಧಿಯ ತೂಕ ಸುಮಾರು 800 ಗ್ರಾಂ ಇರಬಹುದೆಂದು ಹೇಳಲಾಗಿದ್ದು, ಇಂದಿನ ಮಾರುಕಟ್ಟೆ ಮೌಲ್ಯದಲ್ಲಿ ಇದರ ವೆಚ್ಚ ಸುಮಾರು 80 ಲಕ್ಷ ರೂಪಾಯಿಗಳಷ್ಟಿರಬಹುದು.ನಿಧಿ ಪತ್ತೆಯಾದ ತಕ್ಷಣ ಈ ವಿಷಯವನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ರಜಿಯಾಬೇಗ ಅವರಿಗೆ ಕುಟುಂಬದವರು ತಿಳಿಸಿದ್ದಾರೆ. ಪತ್ತೆಯಾದ ವಸ್ತುಗಳಲ್ಲಿ ಎರಡು ಸಾಲುಗಳ 18 ಬಿಲ್ಲೆಗಳು, ಕಾಲ್ಗೆಜ್ಜೆ, ಕಡಗ ಸೇರಿದಂತೆ ಚಿನ್ನದ ಆಭರಣಗಳು ಸೇರಿವೆ ಎಂದು ತಿಳಿದುಬಂದಿದೆ.ಗ್ರಾಮಸ್ಥರು ಮತ್ತು ಕುಟುಂಬದವರು ಜವಾಬ್ದಾರಿಯುತವಾಗಿ ನಡೆದುಕೊಂಡು, ಪತ್ತೆಯಾದ ಈ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರಾದ ಹೆಚ್.ಕೆ. ಪಾಟೀಲ್ ಅವರು, ಆ ಕುಟುಂಬಕ್ಕೆ ಒಂದು ಜಾಗ ಮತ್ತು ಅದರ ಜೊತೆಗೆ ಮನೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.ಇದೇ ಘಟನೆಯಾದ ಎರಡು ದಿನಗಳ ನಂತರ, ಮತ್ತೊಂದು ಪುರಾತನ ವಸ್ತುವು ಪತ್ತೆಯಾಗಿದ್ದು, ಇದರಲ್ಲಿ ಮುತ್ತು ಮತ್ತು ನೀಲಿಮಣಿಯ ಜೊತೆಗೆ 1919ರ ಕಾಲದ ಒಂದು ರೂಪಾಯಿ ನಾಣ್ಯವೂ ಸೇರಿದೆ. ಈ ನಾಣ್ಯವು ಜಾರ್ಜ್ ಕಿಂಗ್ ಎಂಪೆರರ್ ಕಾಲಕ್ಕೆ ಸೇರಿದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.ಈ ನಿಧಿ ಪತ್ತೆಯಾದ ನಂತರ ಸ್ಥಳೀಯರಲ್ಲಿ ವಿವಿಧ ಮಾತುಕತೆಗಳು ಹರಡಿದ್ದು, “ಕೊಟ್ಟವನು ಕೊಡಂಗಿ, ಪಡೆದವನು ವೀರಭದ್ರ” ಎಂಬ ಜನಪ್ರಚಲಿತ ಮಾತುಗಳನ್ನು ಕೆಲವರು ಉಲ್ಲೇಖಿಸುತ್ತಿದ್ದಾರೆ. ಆದರೆ ಎಲ್ಲವನ್ನೂ ಮೀರಿಸಿ, ಸರ್ಕಾರ ಆ ಕುಟುಂಬಕ್ಕೆ ನ್ಯಾಯಯುತವಾಗಿ ನೆರವು ನೀಡಬೇಕು ಎಂಬುದೇ ಗ್ರಾಮಸ್ಥರ ಆಶಯವಾಗಿದೆ.

Post Comment

You May Have Missed